
9th July 2025
ನಮ್ಮ ಮಕ್ಕಳು ನಮ್ಮ ಜೀವನ ಸಂಗಾತಿಗಳಲ್ಲ. ಅವರಿಗೆ ಅವರದ್ದೇ ಆದ ಸ್ವಂತದ ಜೀವನವಿದ್ದು ತಮ್ಮ ಸಂಗಾತಿಗಳನ್ನು ಹೊಂದುತ್ತಾರೆ. ಪಾಲಕರಾಗಿ ನಾವು ಅರಿತುಕೊಳ್ಳಬೇಕಾದದ್ದು ಬಹಳವಿದೆ. ನಮ್ಮ ಮಕ್ಕಳ ಬದುಕಿನಲ್ಲಿ ನಮ್ಮ ಪಾತ್ರ ಬಹಳ ದೊಡ್ಡದು ಎಂದು ನಾವು ಅಂದುಕೊಳ್ಳುತ್ತೇವೆ ಆದರೆ ನಿಜವಾಗಿ ಪ್ರಾಥಮಿಕ ಹಂತದಲ್ಲಿ ಮಾತ್ರ ನಾವು ನಮ್ಮ ಮಕ್ಕಳ ಬದುಕಿನಲ್ಲಿ ಮುಖ್ಯವಾಗಿರುತ್ತೇವೆ. ಮಕ್ಕಳ ಬದುಕಿನಲ್ಲಿ ನಮ್ಮ ಪಾತ್ರ ಅವರ ಪಾಲನೆ ಪೋಷಣೆ ಮಾಡುವುದು ಮತ್ತು ನಮ್ಮ ಪ್ರಾಪಂಚಿಕ ಬದುಕಿನ ಕೌಶಲಗಳನ್ನು ಅವರಿಗೆ ಕಲಿಸಿಕೊಡಲು ಸಲಹೆಗಳನ್ನು ನೀಡಲು ಮಾತ್ರ ಆದರೆ ನಾವು ಎಂದಿಗೂ ಅವರು ತಮ್ಮ ರೆಕ್ಕೆಯನ್ನು ಅಗಲಿಸಿ ಹಾರಿ ಹೋಗದೆ ಇರುವಂತೆ ಮಾಡಲು ಸಾಧ್ಯವಿಲ್ಲ.
ಮಕ್ಕಳು ಬೆಳೆದಂತೆ ನಾವು ಅವರಿಗೆ ಚಿಕ್ಕಂದಿನಲ್ಲಿ ನೀಡಿದ ಶೈಕ್ಷಣಿಕ ಮತ್ತು ಮೌಲ್ಯಯುತ ಬುನಾದಿಗಳು ಅವರಿಗೆ ಬದುಕಿನ ಹಾದಿಯಲ್ಲಿ ಶಕ್ತಿ ಸಾಮರ್ಥ್ಯಗಳನ್ನು ನೀಡಬೇಕೇ ಹೊರತು ಕಡಿವಾಣಗಳಾಗಬಾರದು. ಅವರು ತಮ್ಮದೇ ಆದ ಕನಸುಗಳನ್ನು, ಆಸೆ ಆಕಾಂಕ್ಷೆಗಳನ್ನು ಮತ್ತು ಸಂಬಂಧಗಳನ್ನು ತಮ್ಮ ಮುಂದಿನ ಬದುಕಿನಲ್ಲಿ ಹೊಂದಿರುತ್ತಾರೆ. ಪಾಲಕರಾಗಿ ನಮ್ಮ ಕೆಲಸ ಅವರಿಗೆ ನಾವು ನೀಡುವ ಅದ್ವಿತೀಯ ಬೆಂಬಲ ಮತ್ತು ಪ್ರೀತಿ ಮಾತ್ರ. ಅವರನ್ನು ನಾವು ನಮ್ಮ ಹಿಡಿತದಲ್ಲಿ ಇಟ್ಟುಕೊಳ್ಳುವ ಪ್ರಯತ್ನವನ್ನು ಎಂದೂ ಮಾಡಬಾರದು.
*ಮಕ್ಕಳಿಗೆ ಯಾವುದೇ ರೀತಿಯ ತೊಂದರೆ ಆಗಬಾರದು ಎಂದು ಅವರಿಗೆ ರಕ್ಷಣಾ ಗೋಡೆಯಂತೆ ನಿಲ್ಲದೆ ಅವರು ತಮ್ಮದೇ ಆದ ರೀತಿಯಲ್ಲಿ ಬದುಕಿನ ಎಲ್ಲ ಏರಿಳಿತಗಳನ್ನು, ಸವಾಲುಗಳನ್ನು ಅನುಭವಿಸಲು ಬಿಟ್ಟುಬಿಡಬೇಕು. ಅವರು ಹಿಂಜರಿದಾಗ ಮಾತ್ರ ಅವರ ಕೈಗಳನ್ನು ನಾವು ಗಟ್ಟಿಯಾಗಿ ಹಿಡಿಯಬೇಕು.
*ಪಾಲಕತ್ವದ ಅತಿ ಮುಖ್ಯವಾದ ಪಾಠ ಎಂದರೆ ಮಕ್ಕಳನ್ನು ಅವರ ಇಷ್ಟದಂತೆ ಬಿಟ್ಟು ಬಿಡುವುದು. ಇದೊಂದು ನಂಬಿಕೆಯ ಮತ್ತು ಭರವಸೆಯ ಕ್ರಿಯೆ. ಅವರ ಮೇಲೆ ನಾವು ಇಟ್ಟಿರುವ ನಂಬಿಕೆ ಅವರು ದಾರಿ ತಪ್ಪದೇ ಇರಲು ಮತ್ತು ತಮ್ಮದೇ ಆದ ಜೀವನದ ಪಯಣವನ್ನು ಬೆಳೆಸಲು ಬೇಕಾದ ಅರ್ಹತೆಯನ್ನು ನೀಡಿದರೆ, ಭರವಸೆಯು ಜೀವನದಲ್ಲಿ ಹೆಚ್ಚಿನ ವಿಷಯಗಳನ್ನು ಕಲಿಯಲು ಪ್ರೇರೇಪಿಸುತ್ತದೆ. ನಮ್ಮ ಮಕ್ಕಳು ನಾವು ಬದುಕಿನಲ್ಲಿ ಸಾಧಿಸಲಾಗದ ಆಕಾಂಕ್ಷೆಗಳನ್ನು ಪೂರೈಸುವ ಉಪಕರಣಗಳಲ್ಲ. ಅವರು ತಮ್ಮದೇ ಆದ ಬದುಕಿನ ಗುರಿಗಳನ್ನು ಹೊಂದಿರುವ ಪ್ರಪಂಚ ಜೀವಿಗಳು ನಮಗೆ ಸಾಧ್ಯವಾದರೆ ನಾವು ಅವರ ಜೊತೆ ಜೊತೆಗೆ ಬದುಕಿನ ಹಾದಿಯಲ್ಲಿ ಸಾಗಿ ಅವಶ್ಯಕತೆ ಇದ್ದಾಗ ನಮ್ಮ ಸಹಾಯ ಸಹಕಾರವನ್ನು ನೀಡಬೇಕೇ ಹೊರತು ಅವರ ಮುಂದೆ ಮುಂದೆ ನಾವೇ ನಡೆದು ಅವರ ಹಾದಿಯನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬಾರದು
* ಇನ್ನು ಸಂಬಂಧಗಳ ವಿಷಯಕ್ಕೆ ಬಂದರೆ ಮಕ್ಕಳು ನಮ್ಮ ಪ್ರತಿಬಿಂಬ ಎಂಬುದನ್ನು ನಾವು ಮರೆಯಬಾರದು. ನಮ್ಮ ಸಂಗಾತಿಯೊಂದಿಗೆ ನಮ್ಮ ಪ್ರೀತಿ ಮತ್ತು ಸೌಹಾರ್ದಯುತ ಸಂಬಂಧವನ್ನು ಮಕ್ಕಳು ಗಮನಿಸುತ್ತಿರುತ್ತಾರೆ. ಮಕ್ಕಳ ಪಾಲನೆ ಪೋಷಣೆಯ ಜೊತೆ ಜೊತೆಗೆ ಪಾಲಕರು ತಮ್ಮ ಸಂಗಾತಿಯಲ್ಲಿ ಪ್ರೀತಿ ಮತ್ತು ಬದ್ಧತೆಯನ್ನು ಹೊಂದಿರಲೇಬೇಕು. ಪ್ರೀತಿಪೂರ್ವಕ ಮತ್ತು ಪರಸ್ಪರ ಹೊಂದಾಣಿಕೆ ಇರುವ ಸಂಬಂಧವು ಮಕ್ಕಳಲ್ಲಿ ಸಾಂಗತ್ಯದ ಕುರಿತಾದ ಉನ್ನತ ಭಾವನೆಗಳನ್ನು ನಿರ್ಮಿಸುತ್ತದೆ ಮತ್ತು ಕೌಟುಂಬಿಕ ಬಂಧಗಳನ್ನು ಹೆಚ್ಚಿಸುತ್ತದೆ.
* ಮಕ್ಕಳೊಂದಿಗೆ ಪಾಲಕರು ಹೊಂದಿರುವ ಸಂಬಂಧವು ಸಮಯ ಸರಿದಂತೆ ಸುಂದರವಾಗಿ ಅರಳುತ್ತದೆ. ಮೊದಮೊದಲು ಪಾಲಕರನ್ನು ಎಲ್ಲ ವಿಷಯಗಳಲ್ಲಿಯೂ ಅವಲಂಬಿಸುತ್ತಿದ್ದ ಮಕ್ಕಳು ಮುಂದೆ ಪರಸ್ಪರ ಗೌರವ ಮತ್ತು ವಿಶ್ವಾಸವನ್ನು ಹೊಂದುತ್ತಾರೆ. ತಮ್ಮದೇ ಆದ ಹಾದಿಗಳನ್ನು ಹುಡುಕಿಕೊಂಡು ಅವರು ಮುಂದೆ ಸಾಗುತ್ತಾರೆ ನಿಜ, ಆದರೆ ಸಾಂಗತ್ಯ ಮತ್ತು ಪಾಲಕತ್ವದ ವಿಷಯದಲ್ಲಿ ಅವರು ತಮ್ಮ ಪಾಲಕರನ್ನು ಅವರಿಗರಿವಿಲ್ಲದೆ ಹಿಂಬಾಲಿಸುತ್ತಾರೆ. ಇದೇ ರೀತಿಯ ಸರಪಳಿ ಕ್ರಿಯೆ ಮುಂದುವರೆಯುತ್ತದೆ ಮತ್ತು ಈ ರೀತಿಯಲ್ಲಿ ಕೌಟುಂಬಿಕವಾಗಿ ಮುಂದುವರೆಯುವುದರಲ್ಲಿಯೇ ಬದುಕಿನ ನಿಜವಾದ ಸೌಂದರ್ಯ ಅಡಗಿದೆ.
* ಮಕ್ಕಳು ಭಾವನಾತ್ಮಕವಾಗಿ ನಮ್ಮೊಂದಿಗೆ ಮಿಳಿತಗೊಂಡಿರುತ್ತಾರೆ ಆದರೆ ಈ ಬಂಧನ ಮುಂದೆ ಬಹಳ ದಿನಗಳ ಕಾಲ ನಮ್ಮೊಂದಿಗೆ ಇರುವುದಿಲ್ಲ. ಅವರು ಬೇರೊಬ್ಬರೊಂದಿಗೆ ಈ ಬಂಧನವನ್ನು ಹೊಂದಿದಾಗ ಅದನ್ನು ಭರಿಸುವ ಮತ್ತು ನಿಭಾಯಿಸುವ ಕಲೆಯನ್ನು ಪಾಲಕರು ಕಲಿಯಲೇಬೇಕು. ನಾವು ನಮ್ಮ ಮಕ್ಕಳನ್ನು ಕಳೆದುಕೊಳ್ಳುತ್ತೇವೆ ಎಂದು ಭಾವಿಸಬಾರದು... ಮಕ್ಕಳ ಪ್ರೀತಿಯು ಮತ್ತಷ್ಟು ವಿಸ್ತಾರ ಗೊಳ್ಳುತ್ತಿದೆ ಎಂಬ ಭಾವವನ್ನು ಹೊಂದಬೇಕು ಮತ್ತು ನಾವು ಕೂಡ ಮಕ್ಕಳಿಗೆ ಅವರ ಪ್ರೀತಿಯೊಂದಿಗೆ ಮುಂದಿನ ಬದುಕನ್ನು ನಡೆಸಲು ಅವಕಾಶ ಮಾಡಿಕೊಡಬೇಕು.
*ಮಕ್ಕಳ ಬೆಳವಣಿಗೆಯನ್ನು ಸಂಭ್ರಮದಿಂದ ಎದುರುಗೊಳ್ಳುವಂತೆ ಅವರ ಪ್ರೀತಿ ಮತ್ತು ಸಾಂಗತ್ಯವನ್ನು ಕೂಡ ಅಷ್ಟೇ ಸಂಭ್ರಮ ಮತ್ತು ಸಡಗರದಿಂದ ಎದುರುಗೊಳ್ಳಬೇಕು. ಇದು ನಮ್ಮದೇ ಪ್ರೀತಿ, ನಂಬಿಕೆ ಮತ್ತು ಭರವಸೆಯ ಮುಂದುವರೆದ ಭಾಗ ಎಂಬುದನ್ನು ಮರೆಯಬಾರದು
*ಪಾಲಕರಾಗಿ ನಾವು ನಮ್ಮ ಮನೆ ಮತ್ತು ಮನಗಳು ಮಕ್ಕಳಿಲ್ಲದ ನಿರ್ವಾತದಿಂದ, ಮಕ್ಕಳಿಂದ ದೂರವಾಗುವ ಪ್ರಕ್ರಿಯೆಗೆ ಹೊಂದಿಕೊಳ್ಳಬೇಕು. ಮಕ್ಕಳು ನಮಗೆ ಕರೆ ಮಾಡುತ್ತಿಲ್ಲ ಎಂದು ಬೇಸರಗೊಳ್ಳುವ ಅವಶ್ಯಕತೆ ಇಲ್ಲ. ನಿಧಾನವಾಗಿ ನಮ್ಮ ಅವಶ್ಯಕತೆ ಅವರ ಬದುಕಿನಲ್ಲಿ ಕಡಿಮೆಯಾಗುವ ಸಮಯವಿದು. ಆದರೆ ನೆನಪಿಡಿ ಪಾಲಕರು ಮತ್ತು ಮಕ್ಕಳ ಬಾಂಧವ್ಯ ಮಾತ್ರ ಸಮಯಾತೀತವಾದದ್ದು. ಯಾವುದೇ ರೀತಿಯಾದ ದೈಹಿಕ ಮತ್ತು ಭಾವನಾತ್ಮಕ ದೂರವು ಇದನ್ನು ಮುರಿಯಲಾಗದು.
ಇದೀಗ ಮಕ್ಕಳೊಂದಿಗೆ ಪರಸ್ಪರ ಗೌರವ ಮತ್ತು ನಮ್ಮ ಉಪಸ್ಥಿತಿಯಲ್ಲಿ ಮಕ್ಕಳು ಹೆಚ್ಚಿನ ಶಕ್ತಿ, ಸಾಮರ್ಥ್ಯಗಳನ್ನು ಹೊಂದಿದ್ದೇವೆ ಎಂದು ಭಾವಿಸುವಂತಹ ಬಾಂಧವ್ಯ ಪಾಲಕರ ಮತ್ತು ಮಕ್ಕಳ ನಡುವೆ ಇರಬೇಕು. ಅವಶ್ಯಕತೆ ಇಲ್ಲದೆ ಮಕ್ಕಳಿಗೆ ಯಾವುದೇ ಸಲಹೆಗಳನ್ನು ನೀಡಬಾರದು. ಮಕ್ಕಳು ಯಾವುದೇ ರೀತಿಯ ಸಲಹೆ ನೀಡಬಾರದು.
* ನಮ್ಮ ಸಂಗಾತಿಯೊಂದಿಗೆ ಮಾತ್ರ ಅತ್ಯಂತ ಪ್ರೀತಿಪೂರ್ವಕ ಬಾಂಧವ್ಯ ನಮ್ಮದಾಗಿರಬೇಕು. ಮಕ್ಕಳು ತಮ್ಮ ಬದುಕಿನಲ್ಲಿ ಮುಂದೆ ಸಾಗಿ ಮನೆಯೆಂಬ ಗೂಡಿನಿಂದ ಹಾರಿ ಹೊರಟು ಹೋದಾಗ ನಾವು ದಂಪತಿಗಳು ಮಾತ್ರ ಹಿಂದೆ ಉಳಿಯುತ್ತೇವೆ. ಯಾರೊಂದಿಗೆ ನಮ್ಮ ಇಡೀ ಬದುಕನ್ನು ಕಳೆಯುತ್ತೇವೆ ಎಂದು ಧಾರ್ಮಿಕ ವಿಧಿ ವಿಧಾನಗಳ ಮೂಲಕ ಸಪ್ತಪದಿ ತುಳಿದಿರುತ್ತೇವೆಯೋ ಅವರೊಂದಿಗೆನ ಸಂಬಂಧದಲ್ಲಿ ಕಾಳಜಿ ಮತ್ತು ಪ್ರೀತಿಪೂರ್ವಕ ನಡವಳಿಕೆಗಳನ್ನು ಹೊಂದಿರಬೇಕು. ಪಾಲಕರಾಗಿ ನಾವು ಮಕ್ಕಳೊಂದಿಗೆ ತೀವ್ರ ವ್ಯಸ್ತರಾಗಿದ್ದಾಗಲೂ ಕೂಡ ದಾಂಪತ್ಯದಲ್ಲಿನ ಪ್ರೀತಿ, ವಿಶ್ವಾಸ ಮತ್ತು ಬಾಂಧವ್ಯದ ಬಿಸುಪು ಎಂದೂ ಮರೆಯಾಗದಂತೆ ಕಾಳಜಿ ವಹಿಸಬೇಕು.... ಕಾರಣ ದಾಂಪತ್ಯ ಎಂಬುದು ಜೀವನದ ಎಲ್ಲಾ ಹಂತಗಳಲ್ಲಿಯೂ ನಮ್ಮ ಜೊತೆಗಿರುವ ಬಂಧ... ನಮ್ಮ ಮಕ್ಕಳು ನಮ್ಮಿಂದ ಅಗಲಿದಾಗಲೂ ಪರಸ್ಪರ ಕಾಳಜಿ ಮತ್ತು ಪ್ರೀತಿಪೂರ್ವಕ ಸಾಂಗತ್ಯವನ್ನು ಹೊಂದಿದ ದಂಪತಿಗಳು ಸಂತುಷ್ಟರಾಗಿ ಇರಲು ಸಾಧ್ಯ
ಪಾಲಕತ್ವ ಎಂಬುದು ಕೇವಲ ಕೊಡುತ್ತಲೇ ಸಾಗುವ ಒಂದು ಪಯಣ... ನಮ್ಮ ಪ್ರೀತಿಯನ್ನು, ಸಮಯವನ್ನು, ನಮ್ಮ ಮುಂದಿನ ಜನಾಂಗವನ್ನು ಸುರಕ್ಷಿತವಾಗಿ ಬೆಳೆಸಿ ಒಳ್ಳೆಯ ನಾಗರಿಕರನ್ನಾಗಿ ನೀಡುವ ಈ ಪಾಲಕತ್ವದ ಪಯಣದಲ್ಲಿ ನಾವು ಮಕ್ಕಳ ಜೊತೆ ಜೊತೆಗೆ ನಮ್ಮ ವೈಯುಕ್ತಿಕ ಸಂಬಂಧಗಳನ್ನು ಕೂಡ ಬದ್ಧತೆಯಿಂದ ಕಾಯ್ದುಕೊಳ್ಳಬೇಕು. ಮಕ್ಕಳು ಬೆಳೆದು ದೊಡ್ಡವರಾಗಿ ತಮ್ಮ ಮುಂದಿನ ಬದುಕನ್ನು ಅರಸಿ ಹೊರಟು ಹೋದಾಗಲೂ ಕೂಡ ಕೊನೆಯವರೆಗೆ ನಮ್ಮೊಂದಿಗೆ ಉಳಿಯುವುದು ನಮ್ಮ ಸಂಗಾತಿ ಮಾತ್ರ. ಆದ್ದರಿಂದ ನಮ್ಮ ಜೀವಿತದ ಕೊನೆಯವರೆಗೂ ಇರುವ ಈ ದಾಂಪತ್ಯದ ಸಂಬಂಧವನ್ನು ಕುಟುಂಬದ ಭದ್ರಬುನಾದಿಯಾಗಿಸಬೇಕು.
ಇನ್ನು ಪಾಲಕರಾದವರು ತಮ್ಮ ಮಕ್ಕಳಿಗೆ ತಾವು ಕೊಡಬಹುದಾದ ಅತ್ಯುತ್ತಮ ಉಡುಗೊರೆ ಎಂದರೆ ತಾವು ದಂಪತಿಗಳು ಹೊಂದಿರಬಹುದಾದ
ಆರೋಗ್ಯಕರವಾದ ಮತ್ತು ಪ್ರೀತಿಪೂರ್ವಕ ಸಾಂಗತ್ಯವನ್ನು. ತಮ್ಮ ಪಾಲಕರ ಉತ್ತಮ ದಾಂಪತ್ಯ ಬದುಕು ಮಕ್ಕಳಿಗೆ ಸಾಂಗತ್ಯದ ಶಕ್ತಿಯನ್ನು ತೋರುತ್ತದಲ್ಲದೇ ತಾವು ಕೂಡ ತಮ್ಮ ಬದುಕಿನಲ್ಲಿ ಅಂತಹ ಒಂದು ಗಟ್ಟಿಯಾದ ಬಾಂಧವ್ಯವನ್ನು ಹೊಂದಲು ಸಹಾಯ ಮಾಡುತ್ತದೆ. ಪ್ರೀತಿಯ ಜೊತೆ ಜೊತೆಗೆ ಸ್ವತಂತ್ರ ಮತ್ತು ಪರಸ್ಪರ ಗೌರವಗಳು ಕೂಡ ದಾಂಪತ್ಯದಲ್ಲಿ ಇರುತ್ತವೆ ಎಂಬುದರ ಅರಿವನ್ನು ಮಕ್ಕಳಿಗೆ ಮೂಡಿಸುತ್ತದೆ
ನಮ್ಮ ಮಕ್ಕಳು ನಮ್ಮ ಸಂಗಾತಿಗಳಲ್ಲ ನಿಜ ಆದರೆ ಅವರು ತಮ್ಮದೇ ಆದ ಅರ್ಥಪೂರ್ಣವಾದ ಮತ್ತು ದೀರ್ಘಕಾಲೀನ ದಾಂಪತ್ಯ ಜೀವನವನ್ನು ಹೊಂದಲು ಪಾಲಕರು ಅವರಿಗೆ ಅತ್ಯುತ್ತಮ ಉದಾಹರಣೆಗಳಾಗಿರಬೇಕು.
ಹೌದಲ್ಲವೇ ಸ್ನೇಹಿತರೆ! ಎಷ್ಟೋ ಬಾರಿ ನಾವು ಮಕ್ಕಳನ್ನು ಬೆಳೆಸುವ ನಿಟ್ಟಿನಲ್ಲಿ ಪಾಲಕರು ಪರಸ್ಪರ ಕಿತ್ತಾಡುವುದನ್ನು ಮತ್ತು ಜಗಳವಾಡುವುದನ್ನು ನೋಡುತ್ತೇವೆ. ಆದರೆ ಹಾಗೆ ಅವರಿಬ್ಬರೂ ಕಿತ್ತಾಡುವಾಗ ನಮಗೆ ಆ ಜಗಳದ ಹಿಂದೆ ತಮ್ಮ ಮಕ್ಕಳನ್ನು ಸರಿಯಾದ ನಿಟ್ಟಿನಲ್ಲಿ ಬೆಳೆಸಬೇಕಾದ ಕಾಳಜಿ ಮತ್ತು ಹಠವನ್ನು ಮಾತ್ರ ಆ ದಂಪತಿಗಳಲ್ಲಿ ಇರುವುದನ್ನು ನಾವು ಕಾಣುತ್ತೇವೆ.ನಾವು ನಮ್ಮ ಮಕ್ಕಳಿಗೆ ಬದುಕಿನ ಉತ್ತಮ ವಿಷಯಗನ್ನು ಸೂಚಿಸುವ ಕೈಮರ (ಹ್ಯಾಂಡ್ ಸಿಗ್ನಲ್) ಆಗಿರಬೇಕು.
ದೂರ ಸಮುದ್ರದಲ್ಲಿ ಸಂಚರಿಸುವ ಎಲ್ಲ ಸಣ್ಣಪುಟ್ಟ ತೆಪ್ಪ, ದೋಣಿಗಳಿಂದ ಹಿಡಿದು ಬೃಹದಾಕಾರದ ಹಡಗುಗಳವರೆಗೆ ಎಲ್ಲಕ್ಕೂ ದಿಕ್ಸೂಚಿಯಾಗಿ ನಿಲ್ಲುವುದು ಲೈಟ್ ಹೌಸ್.. ಅಂತಹ ಲೈಟ್ ಹೌಸ್ ನಾವಾಗೋಣ
ಅಂತಹ ಪಾಲಕತ್ವ ನಮ್ಮದಾಗಿರಲಿ ಎಂದು ಆಶಿಸುವ.
ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ, ಗದಗ್
ಸರಕಾರಿ ಕಾಲೇಜಿನ ನೂತನ ಕೊಠಡಿಗಳ ಉದ್ಘಾಟನೆ 20 ಸಾವಿರ ಶಿಕ್ಷಕರ ನೇಮಕ ಶೀಘ್ರದಲ್ಲೆ ಮಾಡುವೆ: ಶಿಕ್ಷಣ ಸಚಿವ ಮಧು ಬಂಗಾರಪ್ಪ